ಜೋಡಿತೆಂಗು -
	ಅರಿಕೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಬಹುವಾರ್ಷಿಕ ತೆಂಗು (ಡಬಲ್ ಕೋಕೊನಟ್). ಲಾಡೊಯ್ಸೀಯ ಸೇಷೆ ಲೇರಮ್ ಎಂಬುದು ಇದರ ಶಾಸ್ತ್ರೀಯ ನಾಮ. ಸೇಷೆಲ್ ದ್ವೀಪಗಳು ಇದರ ತವರು. ಭಾರತದಲ್ಲಿ ಇದನ್ನು ಅಲಂಕಾರಸಸ್ಯವಾಗಿ ಬೆಳಸುವುದುಂಟು. ಇದು ಸುಮಾರು 18-30 m . ಎತ್ತರಕ್ಕೆ ಬೆಳೆಯುತ್ತದೆ. ಕಾಂಡದ ದಪ್ಪ 0.3 m ಕಾಂಡ ನುಣುಪಾಗಿದೆ ಹಾಗೂ ಅದರ ಮೇಲೆ ಉಂಗುರಾಕಾರದ ಗುರುತುಗಳಿವೆ. ಮರದ ತುದಿಯಲ್ಲಿ ಬೀಸಣಿಗೆಕಾಯಿಯಾಕಾರದ 15-20 ಎಲೆಗಳಿವೆ. ಎಲೆಗಳ ತೊಟ್ಟು ಬಹಳ ದಪ್ಪ. ಫಲ ತೆಂಗಿನಕಾಯಿಯಂತೆಯೆ ಇದೆಯಾದರೂ ಎರಡು ಭಾಗಗಳಿಂದ ಕೂಡಿರುವುದು ಇದರ ವೈಶಿಷ್ಟ್ಯ. ಆದ್ದರಿಂದಲೇ ಇದನ್ನು ಜೋಡಿತೆಂಗು ಎಂದು ಕರೆಯುತ್ತಾರೆ. ಫಲದ ಬಣ್ಣ ಆಲಿವ್ ಹಸಿರು. ಒಳಗಿನ ಕರಟ ಕಪ್ಪು ಬಣ್ಣದ್ದು; ಬಹಳ ಮಂದವಾಗಿದೆ.

	ಜೋಡಿತೆಂಗು ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲಿಯೂ ಬೆಳೆಯಬಲ್ಲದು. ಶೇವಪೂರಿತ ಉಷ್ಣ ಹವೆ ಇದರ ಬೆಳವಣಿಗೆಗೆ ಬಹಳ ಸೂಕ್ಷ್ಮ. ಮರ ಸುಮಾರು 30 ವರ್ಷ ವಯಸ್ಸಾದ ಮೇಲೆ ಹೂ ಬಿಡುತ್ತದೆ. ಹೂ ಬಿಟ್ಟಂದಿನಿಂದ, ಹಣ್ಣಾಗಲು 3-10 ವರ್ಷಗಳು ಬೇಕು. 

	ಜೋಡಿತೆಂಗಿನ ಕರಟದಿಂದ ಲೋಟ, ತಟ್ಟೆಗಳನ್ನೂ ಕೆತ್ತನೆ ಕೆಲಸ ಮಾಡಿದ ಅಲಂಕಾರ ವಸ್ತುಗಳನ್ನೂ ತಯಾರಿಸಲಾಗುತ್ತದೆ. ಎಲೆಗಳನ್ನು ಗುಡಿಸಲುಗಳ ಮೇಲೆ ಹೊದಿಸಲು ಮತ್ತು ಬುಟ್ಟಿಗಳನ್ನು ಮಾಡಲು ಉಪಯೋಗಿಸುವರು. ಅರ್ದ ಬಲಿತ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಉದ್ದುದ್ದವಾಗಿ ಸೀಳಿ, ಹೆಣೆದು ಟೊಪ್ಪಿಗೆಯನ್ನು ಮಾಡುವುದುಂಟು. ಕಾಂಡದ ಒಳಗಿರುವ ತಿರುಳನ್ನು ತೆಗೆದು ಹಾಕಿ, ಒಣಗಿಸಿ ನೀರನ್ನು ತುಂಬಿಡುವ ಹಂಡೆಗಳನ್ನು ಮಾಡುವುದಿದೆ. ಪೂರ್ತಿ ಬಲಿಯಾದ ಕಾಯಿಯ ತಿರುಳನ್ನು ಮತ್ತು ಎಳಸಾದ ತುದಿಯನ್ನು ತಿನ್ನುವುದುಂಟು. ಕಾಯಿಯ ನೀರು ಮತ್ತು ತಿಂಗಳುಗಳಿಗೆ ಆಮ್ಲ ವಿರೋಧಿ ಮತ್ತು ಪಿತ್ತನಾಶಕ ಗುಣಗಳಿವೆ. ಕಾಯಿಯ ತೊಗಟೆಯ ರಸಕ್ಕೆ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸುವ ಗುಣವಿದೆ ಇದನ್ನು ಮಧುಮೇಹ ರೋಗಿಗಳಿಗೆ ಕೊಡುತ್ತಾರೆ.
(ಎಸ್.ಆರ್.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ